ಕಾಣಿಸುವುದು ನಮಗೆ ಕಾಣದ ಜೀವಾಣು,
ಕಾಣಬಲ್ಲೆವು ನಾವು ಜೀವಕೋಶದ ಪ್ರತಿ ಅಣು
ರಕ್ತ ಕಣಗಳಲ್ಲಿ ಏರುಪೇರಾಗಿ ಪರಿತಪಿಸುವ ಪಾಡು,
ಭೇದಿಸುವೆವು ಅವುಗಳಲ್ಲಿ ಆಗುವ ಬದಲಾವಣೆಯ ಜಾಡು.
ನಮ್ಮ ಲೋಕದಲ್ಲಿವೆ ನೀಲಿ ಗುಲಾಬಿಯ ವರ್ಣ,
ಅವುಗಳ ಸಹಾಯದಿಂದ ಮಾಡುವೆವು ರೋಗದ ಅನಾವರಣ
ರೋಗ ನಿರ್ಣಯಿಸಿ ಚಿಕಿತ್ಸೆಗೆ ರೂಪಿಸುವೆವು ಸೂತ್ರ,
ರೋಗಿಯ ಒಳಿತಿನಲ್ಲಿ ನಮ್ಮ ಸಣ್ಣ ಪಾತ್ರ…..
ಸೂಕ್ಷ್ಮದರ್ಶಕವೇ ನಮ್ಮ ಸಂಗಾತಿ,
ಅದರ ಮೂಲಕ ತಿಳಿಯುವೆವು ರೋಗದ ಸಂಗತಿ
ಜೀವಕೋಶಗಳ ರಚನಾತ್ಮಕ ಬದಲಾವಣೆಗೆ ನೀಡಿ ಚಿತ್ರಣ
ಕ್ಯಾನ್ಸರ್ ಅಂಶಗಳ ಹುಡುಕಿ ಪುರಾವೆ, ಕೊಡುವೆವು ದೃಡೀಕರಣ..
ತೆರೆ ಮರೆಯ ಕಾರ್ಯ ನಮ್ಮದು ಜನರಿಗೆ ಅಗೋಚರ
ಪರದೆಯ ಹಿಂದಿದೆ ನಮ್ಮ ಕಾರ್ಯಕುಶಲೋಪರಿಯ ವಿವರ
ವೈದ್ಯರ ದ್ವಂದ್ವಕ್ಕೆ ತೋರುವೆವು ಸ್ಪಷ್ಟತೆಯ ಹಾದಿ,
ಮುಂದಿನ ಚಿಕಿತ್ಸೆಗೆ ಹಾಕುವೆವು ಬುನಾದಿ……..